ತೇಮ್ಸ್
ದಕ್ಷಿಣ ಇಂಗ್ಲೆಂಡಿನ ಒಂದು ನದಿ.  ಗ್ಲಾಸ್ಟರ್‍ಷೈರ್‍ನಲ್ಲಿ ಕಾಟ್ಸ್‍ವೋಲ್ಡ್  ಬೆಟ್ಟದ ಇಳಿಜಾರಿನ ಹಲವು ತಲೆದೊರೆಗಳಲ್ಲಿ ಇದು ಉಗಮಿಸುತ್ತದೆ. ಸಮುದ್ರಮಟ್ಟದಿಂದ 109 ಮೀ. (356) ಎತ್ತರದಲ್ಲಿರುವ ತೇಮ್ಸ್ ಹೆಡ್ ಎಂಬುದು ಇದರ ಉಗಮ ಸ್ಥಳವೆಂಬುದಾಗಿ ಪರಂಪರಾಗತವಾಗಿ ಬಂದಿರುವ ಹೇಳಿಕೆ. ಗ್ಲಾಸ್ಟರ್‍ಷೈರ್, ವಿಲ್ಟ್‍ಷೈರ್, ಅಕ್ಸ್‍ಫರ್ಡ್‍ಷೈರ್, ಬರ್ಕ್‍ಷೈರ್, ಸರ್ರೀ, ಕೆಂಟ್ ಮತ್‍ತು ಎಸೆಕ್ಸ್‍ಗಳಲ್ಲಿ ಪೂರ್ವಾಭಿಮುಖವಾಗಿ ಹರಿಯುತ್ತದೆ. ಬೃಹತ್ ಲಂಡನ್ನನನು  ಇದು ಇಬ್ಭಾಗಿಸುತ್ತದೆ. ತೇಮ್ಸ್ ಹೆಡ್‍ನಿಂದ ಉತ್ತರ ಸಮುದ್ರವನ್ನು ಸೇರುವವರೆಗೆ ಇದರ ಉದ್ದ ಸುಮಾರು 338ಕಿಮೀ.(210ಮೈ.). ಆಕ್ಸ್‍ಫರ್ಡ್ ಹತ್ತಿರ ಕೇವಲ 125 ಅಡಿ ಅಗಲವಿರುವ ಈ ನದಿ, ಟೆಡಿಂಗ್ಟನ್ ಬಳಿ 250 ಅಡಿ, ಲಂಡನ್ ಸೇತುವೆಯ ಬಳಿ 750 ಅಡಿ ಮತ್ತು ಗ್ರೇವ್ ಸೆಂಡ್ ಹತ್ತಿರ 2,100 ಅಡಿ ಅಗಲವಾಗುತ್ತದೆ. ಅಲ್ಲಿಂದ ಕೆಳಕ್ಕೆ ಈ ನದಿಯ ಅಳಿವೆ ಹೆಚ್ಚು ಹೆಚ್ಚು ಅಗಲವಾಗುತ್ತ ಸಾಗಿ 51/2 ಮೈ.ಗೆ ಹಿಗ್ಗುತ್ತದೆ. ನದಿಯ ಉಗಮದಿಂದ ಭರತದ ನೀರಿನವರೆಗೆ ಇದರ ಎತ್ತರದ ಸರಾಸರಿ ಇಳಿತ ಕಿಮೀ. ಗೆ 47ಸೆಂ.ಮೀ.(ಮೈ.ಗೆ30"). ಈ ನದಿಯ ಎಡಭಾಗದಲ್ಲಿ ಕ್ರಿಕ್ಲೇಡ್ ಬಳಿ ಚರ್ನ್ ನದಿಯೂ ಲೆಕ್ಲೇಡ್ ಬಳಿ ಕೋಲ್ನ್ ನದಿಯೂ ನ್ಯೂ ಬ್ರಿಜ್ ಬಳಿ ವಿಂಡ್ರಷ್ ನದಿಯೂ ಐನ್‍ಷಾಮ್ ಕೆಳಗಡೆ ಈವನ್‍ಲೋಡ್ ನದಿಯೂ ಕೂಡಿಕೋಳ್ಳುತ್ತದೆ.  ಅನಂತರ ಈ ನದಿ ಉತ್ತರಕ್ಕೆ ತಿರುಗಿ ವೈತಾಮ್  ಬೆಟ್ಟವನ್ನು ಬಳಸಿಕೊಂಡು ಮುಂದುವರಿದು ಮತ್ತೆ ಸರಕ್ಕನೆ ದಕ್ಷಿಣಕ್ಕೆ ಮುಖ ಮಾಡಿ ಅಕ್ಸ್‍ಫರ್ಡ್ ಹತ್ತಿರ ಚೆರ್‍ವೆಲ್ ನದಿಯನ್ನು ಕೂಡಿಕೊಳ್ಳುತ್ತದೆ. ಅಬಿಂಗ್ಡನ್ ಬಳಿ ಆಕ್ ನದಿಯೂ ಡಾರ್ಚೆಸ್ಟರ್ ಬಳಿ ತೇಮ್ ನದಿಯೂ ಸಂಗಮಿಸುತ್ತವೆ. ಮುಂದೆ ಈ ನದಿ ಮತ್ತೆ ಪೂರ್ವಕ್ಕೆ ತಿರುಗಿ ಸುಂದರವಾದ ಮರಗಳಿಂದ  ಕೂಡಿದ ಕಣಿವೆಯಲ್ಲಿ ಸಾಗುತ್ತದೆ. ಇದರ ಬಲದಂಡೆಯಲ್ಲಿ ರೀಡಿಂಗ್  ಬಳಿ ಸೇರುವ ನದಿ ಕೆನೆಟ್, ಷಿಪ್‍ಲೇಕ್ ಬಳಿ ಲಾಡನ್ ಸಂಗಮಿಸುತ್ತದೆ. ಇದರ ಇತರ ಉಪನದಿಗಳು ಕೋಲ್ನ್, ವೇ ಮತ್ತು ಮೋಲ್. ಟೆಡಿಂಗ್ಟನ್ ಲಾಕ್‍ನಿಂದ ಮುಂದೆ ಇದು ಅಳಿವೆಯ  ಸ್ವರೂಪ ತಳೆಯುತ್ತದೆ.

ಈ ಇತಿಹಾಸ ಪ್ರಸಿದ್ಧವಾದ ನದಿಯ ಪ್ರಾಚೀನ ಹೆಸರು ಟ್ಯಾಮಸಿಸ್. ಜ್ಯೂಲಿಯಸ್ ಸೀಸರ್ ಇದನ್ನು ಹಾಗೆಂದು ಕರೆದಿದ್ದಾನೆ. ಇತರ ಇಂಗ್ಲಿಷ್ ದಾಖಲೆಗಳಲ್ಲಿ ಇದನ್ನು ಟ್ಯಾಮಿಸ್, ಟ್ಯಾಮಿಸ, ಟ್ಯಾಮನ್ಸಿಮ್ ಎಂದು ಕರೆಯಲಾಗಿದೆ. ಟ್ಯಾಮಸಿಸ್ ಎಂಬುದು ತೇಮ್ಸ್ ಮತ್ತು ಐಸಿಸ್ ಎಂಬ ಎರಡು ಹೆಸರುಗಳ ಸಂಯುಕ್ತವೆಂದು 14ನೆಯ ಶತಮಾನದ ವಿದ್ವಾಂಸರು ಭಾವಿಸಿ ಇದರ ಮೇಲ್ಭಾಗವನ್ನು ಐಸಿಸ್ ಎಂದು ಕರೆದರು. ಡಾರ್ಚೆಸ್ಟರ್‍ನಿಂದ ಕೆಳಗಿನ ಭಾಗ ಮಾತ್ರ ತೇಮ್ಸ್ ಎಂದು ಅವರು ತಪ್ಪಾಗಿ ಬಗೆದರು.

ಬೇಕಾದಷ್ಟು ನೀರನ್ನು ಒಳಗೊಳ್ಳಬಲ್ಲಂಥ ಪಾತ್ರ. ವರ್ಷದ ಉದ್ದಕ್ಕೂ ಸುರಿಯುವ ಮಳೆ-ಇವುಗಳಿಂದಾಗಿ ತೇಮ್ಸ್ ನದಿಯಲ್ಲಿ ಸರ್ವದಾ ಪ್ರವಾಹ ತಕ್ಕಮಟ್ಟಿಗೆ ಇರುತ್ತದೆ.  ನದಿಯಲ್ಲಿ ನೀರು ಕನಿಷ್ಠವಾಗಿರುವುದು ಬೇಸಗೆಯಲ್ಲಿ. ಅದರೆ  ಅಕ್ಟೋಬರ್‍ನಿಂದ ಮೇ ತಿಂಗಳವರೆಗಿನ ಅವಧಿಯಲ್ಲಿ.  ಈ ನದಿಯಲ್ಲಿ ಹೆಚ್ಚು ಪ್ರವಾಹ ಬರುವುದುಂಟು. ಜನವರಿಯಲ್ಲಿ ಸರಾಸರಿ 4,877 ಕ್ಯೂಸೆಕ್(1 ಕ್ಯೂಸೆಕ್=ಸೆಕೆಂಡಿಗೆ 0.0283 ಘನ ಮೀ.) ಮತ್ತು ಆಗಸ್ಟ್‍ನಲ್ಲಿ 1.067 ಕ್ಯೂಸೆಕ್  ನೀರು ಹರಿಯುತ್ತದೆ.  ಮಹಾಪೂರ ಬಂದಾಗ ಈ ನದಿಯ ನೀರಿನ ದೈನಿಕ ಹರಿವು 19,000 ಕ್ಯೂಸೆಕ್‍ಗಳಿಗೂ ಅಧಿಕವಾಗಬಹುದು.

ಲಂಡನ್  ಮತ್ತು ಅದರ ಉಪನಗರಗಳಿಗೂ ಅಕ್ಸ್‍ಫರ್ಡ್ ಮತ್ತು ಫ್ಯಾರಿಂಗ್ಡನ್‍ಗಳಿಗೂ ನೀರಿನ ಪೂರೈಕೆಯಾಗುವುದು ಈ ನದಿಯಿಂದ; ಇದರ ನೀರು ಮಲಿನವಾಗದಂತೆ ತೇಮ್ಸ್ ಕನ್ಸರ್ವೆನ್ಸಿ ಪ್ರಾಧಿಕರಣ ವ್ಯವಸ್ಥೆ ಮಾಡಿದೆ. ಅಲ್ಲದೆ ಅದು ನದಿಯಲ್ಲಿ ಮೀನುಗಾರಿಕೆಯನ್ನೂ ನಿಯಂತ್ರಿಸುತ್ತದೆ.  ಟೆಡಿಂಗ್ಟನ್‍ನಿಂದ  ಉತ್ತರ ಸಮುದ್ರದವರೆಗಿನ(92 ಮೈ.) ನದೀಭಾಗದ ನಿಯಂತ್ರಣವನ್ನು 1908ರಲ್ಲಿ ಲಂಡನ್ ಬಂದರು ಪ್ರಾಧಿಕರಣದ ವಶಕ್ಕೆ ಕೊಡಲಾಯಿತು. ಬೇಸಗೆಯಲ್ಲಿ ಈ ನದಿಯ ಮೇಲೆ ಟೆಡಿಂಗ್ಟನ್‍ನಿಂದ ಕಿಂಗ್‍ಸ್ಟನ್ ವರೆಗೆ ಪ್ರತಿದಿನವೂ ಸ್ಟೀಮರುಗಳು ಸಂಚರಿಸುತ್ತವೆ. ತೇಮ್ಸ್ ನದಿಯ ಮೇಲೆ ಲಂಡನಿನವರೆಗೂ ಹಡಗುಗಳು ಸಂಚರಿಸುತ್ತವೆ.
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ